ಬೆಂಗಳೂರು || ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಎರಡನೇ ವಿಮಾನ ನಿಲ್ದಾಣ: ಕಾರಣ ಬಿಚ್ಚಿಟ್ಟ ಎಂ ಬಿ ಪಾಟೀಲ್

ಬೆಂಗಳೂರು || ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಎರಡನೇ ವಿಮಾನ ನಿಲ್ದಾಣ: ಕಾರಣ ಬಿಚ್ಚಿಟ್ಟ ಎಂ ಬಿ ಪಾಟೀಲ್

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಎರಡನೇ ವಿಮಾನ ನಿಲ್ದಾಣ ಯೋಜನೆಗೆ ಮುಂದಾಗಿದೆ. ಬಹು ನಿರೀಕ್ಷಿತ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಕುರಿತು ರಾಜ್ಯ ಸರ್ಕಾರ ಈಗಾಗಲ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ 2033 ವೇಳೆಗೆ ಬೆಂಗಳೂರು ಸಮೀಪ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಂಗಳೂರು ಬೆಳೆಯುತ್ತಿದೆ. ಹೀಗಾಗಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಆದರೆ, ಎರಡನೇ ವಿಮಾನ ನಿಲ್ದಾಣಕ್ಕೆ ಈಗಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಒಪ್ಪಂದ ಅಡ್ಡಿಯಾಗಿದೆ. ಈ ಒಪ್ಪಂದದ ಕುರಿತು ಮೂಲ ಸೌಕರ್ಯ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ಮಹಾನಗರದ ಮುಂಬರುವ ಅಗತ್ಯಗಳನ್ನು ಗಮನದಟ್ಟುಕೊಂಡು ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಎಂ.ಬಿ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಎಂಬಿ ಪಾಟೀಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನಮಗೂ ಒಪ್ಪಂದ ಇದೆ. ಆ ಒಪ್ಪಂದದ ಪ್ರಕಾರ 2033ರವರೆಗೆ ಬೇರೊಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಅವಕಾಶ ಇಲ್ಲ. 2033ಕ್ಕೆ ಆ ಒಪ್ಪಂದ ಮುಗಿಯುತ್ತೆ. ಆಗ ನಾವು ಎರಡನೇ ಏರ್ಪೋರ್ಟ್ ಮಾಡಬೇಕಾಗುತ್ತೆ ಎಂದು ಕಾರಣವನ್ನ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ. ಅಷ್ಟರಲ್ಲಿ ಒಪ್ಪಂದ ಹೋಗುತ್ತೆ ಎಂದು ಎರಡನೇ ಏರ್ಪೋರ್ಟ್ ಮಾಡುತ್ತಿಲ್ಲ. ಪ್ರಯಾಣಿಕರ ಲೋಡ್ ಬಗ್ಗೆ ಪರಾಮರ್ಶೆ ಮಾಡಿದ್ದೇವೆ. 2032ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನಸಂದಣಿ ಆಗಿಬಿಡುತ್ತೆ. ಮತ್ತೊಂದು ಏರ್ಪೋರ್ಟ್ ನ ಅವಶ್ಯಕತೆ ನಮಗೆ ಬೇಕಾಗುತ್ತದೆ. ಸದ್ಯ ಮುಂಬೈ, ಗೋವಾ, ದೆಹಲಿಯಲ್ಲೂ ಹೊಸ ವಿಮಾನ ನಿಲ್ದಾಣ ಓಪನ್ ಆಯ್ತು. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಬೇಕಾಗುತ್ತದೆ ಎಂದು ಮೂಲ ಸೌಕರ್ಯ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಸ್ಪಷ್ಟಪಡಿಸಿದರು.

ನ್ಯೂಯಾರ್ಕ್, ಲಂಡನ್ ದೇಶಗಳಲ್ಲೂ ಎರಡೆರೆಡೆ ವಿಮಾನ ನಿಲ್ದಾಣಗಳಿವೆ. ಪ್ರಾಥಮಿಕವಾಗಿ ಗುರುವಾರ ಚರ್ಚೆ ಮಾಡಿದ್ದೀವಿ ಅಷ್ಟೆ. ಎಲ್ಲಿ, ಎಷ್ಟು ಎಕರೆ ಜಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿಲ್ಲ. ಕೆಲವು ಮಾನದಂಡ ಬೇಕಾಗುತ್ತದೆ. ಅದನ್ನ ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ. ಚರ್ಚೆ ಮಾಡಿ ನಂತರ ಜಾಗದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಎಂ ಬಿ ಪಾಟೀಲ್ ಅವರು ತಿಳಿಸಿದರು.

ಇನ್ನೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ನಿರ್ಮಿಸುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್) ಮುಂದಿನ 25 ವರ್ಷಗಳವರೆಗೆ (2033ರವರೆಗೆ) 150 ಕಿಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದಿಲ್ಲ ಎಂದು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಷರತ್ತು ಮುಗಿಯಲು ಇನ್ನೂ ಒಂಬತ್ತು. ವರ್ಷಗಳಿದ್ದು, ಈಗಿನಿಂದಲೇ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಚಿಂತನೆಗಳು ನಡೆದಿವೆ ಎಂದು ತಿಳಿಸಿದರು. ಶರವೇಗದಲ್ಲಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. 2023-24ನೇ ಸಾಲಿನಲ್ಲಿ 3.75 ಕೋಟಿ ಪ್ರಯಾಣಿಕರು ಕೆಬಿಎ ಮೂಲಕ ಪ್ರಯಾಣಿಸಿದ್ದಾರೆ. ಅಲ್ಲದೆ, 4 ಲಕ್ಷ ಟನ್ ಗೂ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ. ಈ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಲಿದ್ದು, ಅದನ್ನು ಗಮನದಲ್ಲಿಟ್ಟುಗೊಂಡ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು.

Leave a Reply

Your email address will not be published. Required fields are marked *