ಬೆಂಗಳೂರು : ಬೆಂಗಳೂರು ನಮ್ಮ ಮೆಟ್ರೋ ಜಾಲ ವಿಸ್ತರಣೆ ಮಾಡುತ್ತಿರುವ BMRCL ಇದೇ ಮೊದಲ ಬಾರಿಗೆ ಅಂತರ ಜಿಲ್ಲೆಯ ಸಂಪರ್ಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸಂಬಂಧ ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಲ್ಲಿಕೆ ಮಾಡಿದೆ. ಈ ಮೂಲಕ ನಮ್ಮ ಮೆಟ್ರೋ ಯೋಜನೆಗಳ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಜೊತೆಗೆ ತುಮಕೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಆಸುಪಾಸಿನಲ್ಲಿ ಅಭಿವೃದ್ಧಿ ವೇಗ ಪಡೆದಿದೆ. ಇದೇ ವೇಳೆ ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡಬೇಕು ಎಂಬ ಬಹುದಿನಗಳ ಬೇಡಿಕೆ, ಕನಸು ಸಾಕಾರವಾಗುವ ಕಾಲ ಹತ್ತಿರವಾಗಿದೆ. ಖಾಸಗಿ ಕಂಪನಿಯಿಂದ ಸ್ವೀಕರಿಸಿದ ಬೆಂಗಳೂರು-ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅನುಮೋದನೆ ದೊರೆತರೆ ತ್ವರಿತಗತಿಯಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು ನಗರ ಹಾಗೂ ತುಮಕೂರಿಗೆ ಒಟ್ಟು 56.6 ಕಿಮೀ ಮೆಟ್ರೋ ಮಾರ್ಗದ ಕಾರ್ಯಸಾಧ್ಯತೆ ವರದಿ ತಯಾರಾಗಿದೆ. ವರದಿಯನ್ನು ಮೆಟ್ರೋ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇನ್ನೂ ಈ ಬಗ್ಗೆ ಸರ್ಕಾರ ಯಾವ ತಿರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಈ ಮಾರ್ಗವು ಎಲ್ಲಿಂದ ಆರಂಭವಾಗುತ್ತದೆ, ಒಟ್ಟು ನಿಲ್ದಾಣಗಳು ಇತರ ಮಾಹಿತಿ ಇಲ್ಲಿದೆ.
25 ಮೆಟ್ರೋ ನಿಲ್ದಾಣಗಳು ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗದಲ್ಲಿ ಒಟ್ಟು 25 ಎತ್ತರದ ನಿಲ್ದಾಣಗಳು ಬರಲಿವೆ. ಸಿದ್ಧಪಡಿಸಿದ ವರದಿಗಳ ಪ್ರಕಾರ, ಮೆಟ್ರೋ ಹಸಿರು ಮಾರ್ಗದ ಸದ್ಯದ ಕೊನೆ ನಿಲ್ದಾಣ ಮಾದವರ (ಬಿಐಇಸಿ) ನಿಲ್ದಾಣದಿಂದ ಮುಂದೆ ತುಮಕೂರಿನ ಶಿರಾವರೆಗೆ ಮೆಟ್ರೋ ಯೋಜನೆ ಮುಂದುವರಿಯಲಿದೆ. ಈ ಕುರಿತು ನಮ್ಮ ಮೆಟ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾಣ್ ತಿಳಿಸಿದ್ದಾರೆ. ಎಲ್ಲವು ಅಂದುಕೊಂಡಂತಾದರೆ ತುಮಕೂರು ಪ್ರಯಾಣ ಮತ್ತಷ್ಟು ಆರಾಮದಾಯಕವಾಗಲಿದೆ.
ಬೆಂಗಳೂರು-ತುಮಕೂರು ಮೆಟ್ರೋ ಸಾಗುವ ಮಾರ್ಗ ಬೆಂಗಳೂರಿನಿಂದ ತುಮಕೂರುವರೆಗೆ ಮೆಟ್ರೋ ನಿರ್ಮಾಣವಾದರೆ, ಮಾದವರದಿಂದ ಮುಂದೆ ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ (ಟಿಜಿ ಹಳ್ಳಿ), ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಬಡಾವಣೆ, ನಾಗಣ್ಣಪಾಳ್ಯ, ಹಾಗೂ ಶಿರಾ ಗೇಟ್ ವರೆಗೆ ನಿರ್ಮಿಸಲು ಸಕಾರಾತ್ಮಕ ಅಂಶಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಸರ್ಕಾರ ಬಳಿಕ ಕೇಂದ್ರದ ಅನುಮೋದನೆ ಈಗಾಗಲೇ ರಾಜ್ಯ ಸರ್ಕಾರ ದೇವನಹಳ್ಳಿ, ರಾಮನಗರ ವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಮನಸ್ಸು ಮಾಡಿದೆ. ಇದೀಗ ಸರ್ಕಾರ ಶೀಘ್ರದಲ್ಲೇ ತುಮಕೂರುವರೆಗೆ ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ಬಗ್ಗೆ ಚರ್ಚಿಸಿ ಅನುಮೋದನೆ ನೀಡುವ ಸಂಭವವಿದೆ. ರಾಜ್ಯ ಸರ್ಕಾರದ ಬಳಿಕ ಕೇಂದ್ರ ಸಚಿವಾಲಯದಿಂದಲೂ ಅನುಮೋದನೆ ದೊರೆತರೆ ಡೆಂಟರ್ ಪ್ರಕ್ರಿಯೆ, ಭೂಮಿ ಗುರುತಿಸುವಿಕೆ, ಭೂಸ್ವಾಧಿನ ಕಾರ್ಯ ನಡೆಯಬೇಕಿದೆ. ಒಟ್ಟಾರೆ ಬೆಂಗಳೂರಿಗೆ ಮಾತ್ರವಲ್ಲದೇ ಹೊರ ವಲಯ ಹಾಗೂ ಹತ್ತಿರದ ಜಿಲ್ಲೆಗಳ ನಿವಾಸಿಗಳಿಗೂ ಸುಹಿ ಸುದ್ದಿ ಸಿಕ್ಕಂತಾಗಿದೆ.