ಚಿಕ್ಕಮಗಳೂರು || ಶರಣಾದ ನಕ್ಸಲರಿಗೆ ಎಷ್ಟು ಹಣ ಸಿಗುತ್ತೆ? ಸರ್ಕಾರದ ಪ್ಯಾಕೇಜ್ ಏನು?

ಚಿಕ್ಕಮಗಳೂರು || ಶರಣಾದ ನಕ್ಸಲರಿಗೆ ಎಷ್ಟು ಹಣ ಸಿಗುತ್ತೆ? ಸರ್ಕಾರದ ಪ್ಯಾಕೇಜ್ ಏನು?

ಚಿಕ್ಕಮಗಳೂರು: ವಿಕ್ರಂಗೌಡ ಎನ್‌ಕೌಂಟರ್ (Vikramgowda Encounter) ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ 6 ಮಂದಿ ನಕ್ಸಲರು (Naxals) ಇಂದು ಶಸ್ತ್ರಾಸ್ತ್ರವನ್ನು ತೊರೆದು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರೀಕ ಸಮಿತಿ ಸತತ ಪ್ರಯತ್ನದ ಅಂಗವಾಗಿ ಇಂದು ನಕ್ಸಲರು ಶರಣಾಗಲಿದ್ದಾರೆ.

ಈಗಾಗಲೇ ಆರು ಜನ ಶಾಂತಿಗಾಗಿ ನಾಗರೀಕ ವೇದಿಕೆಗೆ ಶರಣಾಗತಿಗೆ ಪತ್ರ ನೀಡಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್‌ಪಿ ವಿಕ್ರಂ ಅಮಟೆ ಸಮ್ಮುಖದಲ್ಲಿ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ್ ಹಾಗೂ ಎನ್.ಜೀಶಾ ಶರಣಾಗತಿಯಾಗಲಿದ್ದಾರೆ. ಇನ್ನು ಶರಣಾದ ನಕ್ಸಲರಿಗೆ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಿಸಿದೆ.

ಪ್ಯಾಕೇಜ್ ಏನು?

ಎ ಕೆಟಗರಿ:

ನಕ್ಸಲರು ರಾಜ್ಯದವರೇ ಆಗಿ, ಆಕ್ಟೀವ್ ಆಗಿದ್ದು ಕೇಸ್ ಇದ್ದರೆ ಅಂತಹವರಿಗೆ ಎ ಕೆಟಗರಿ ಅಡಿಯಲ್ಲಿ 7.50 ಲಕ್ಷ ರೂ. ಹಣವನ್ನು ನೀಡಲಾಗುತ್ತದೆ.

ಬಿ ಕೆಟಗರಿ:

ನಕ್ಸಲರು ಹೊರರಾಜ್ಯದವರಾಗಿ, ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಆತನ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ದರೆ 4 ಲಕ್ಷ ರೂ. ಹಣ ನೀಡಲಾಗುತ್ತದೆ.

ಸಿ ಕೆಟಗರಿ:

ಎಡಪಂಥೀಯ ಭಯೋತ್ಪಾದನಾ ಚಟುವಟಿಕೆ ಬೆಂಬಲಿಸುವ ನಕ್ಸಲರ ಸಂಪರ್ಕ ಹೊಂದಿ, ಪ್ರಕರಣಗಳು ಇದ್ದರೆ ಅಂತಹವರಿಗೆ 2 ಲಕ್ಷ ರೂ. ಹಣವನ್ನು ಸರ್ಕಾರ ನೀಡುತ್ತದೆ. ನಕ್ಸಲರು ಒಟ್ಟು ಮೂರು ಭಾಗಗಳಾಗಿ ಹಣ ಪಡೆಯುತ್ತಾರೆ.

ಇನ್ನು ಆಯುಧಗಳನ್ನು ಹಾಜರುಪಡಿಸಿದರೆ ಕೆಟಗರಿ ಹಾಗೂ ಆಯುಧಗಳ ಮೇಲೆ ಹಣ ನೀಡಲಾಗುತ್ತದೆ. ಅಲ್ಲದೇ ಶರಣಾದ ನಕ್ಸಲರ ವ್ಯಾಪಾರ, ವೃತ್ತಿಗೆ ಸರ್ಕಾರ ಸಹಕಾರ ನೀಡುತ್ತದೆ. ನಕ್ಸಲರು ತರಬೇತಿ ಸಂಸ್ಥೆಗೆ ಸೇರಿದ ಬಳಿಕ ವರ್ಷದವರೆಗೆ 5,000 ರೂ. ಹಣ ನೀಡಲಾಗುವುದು. ಇಷ್ಟು ಮಾತ್ರವಲ್ಲದೇ ಶರಣಾಗುವ ನಕ್ಸಲರಿಗೆ ಸರ್ಕಾರದ ಎಲ್ಲಾ ಸೌಲಭ್ಯವನ್ನು ಸರ್ಕಾರ ನೀಡುತ್ತದೆ.

ನಕ್ಸಲರ ಪ್ರಮುಖ ಬೇಡಿಕೆಗಳೇನು?

– ನಕ್ಸಲರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು.

– ಪ್ರಜಾತಾಂತ್ರಿಕ ಹೋರಾಟಕ್ಕೆ ಯಾವುದೇ ತೊಡಕಾರಬಾರದು.

– ಸಂಬಂಧವಿಲ್ಲದ ಪ್ರಕರಣದಿಂದ ತಮ್ಮ ಹೆಸರು ಕೈಬಿಡಬೇಕು.

– ಬೇಗ ಜಾಮೀನಿನ ಮೇಲೆ ಬರಲು ಸಹಕರಿಸಬೇಕು.

– ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಇತ್ಯರ್ಥಕ್ಕೆ ಸಹಕರಿಸಬೇಕು.

– ಕೌಶಲ ತರಬೇತಿಗೆ ಸಹಕಾರ ನೀಡಬೇಕು.

– ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು.

– ಸರ್ಕಾರ ನಕ್ಸಲರ ಬಗ್ಗೆ ಅನುಕಂಪದಿಂದ ವರ್ತಿಸಬೇಕು.

– ಸಮಾಜದ ಮುಖ್ಯವಾಹಿನಿಗೆ ಬಂದಿರುವ ಎಲ್ಲಾ ನಕ್ಸಲರಿಗೂ ಎಲ್ಲಾ ಸೌಲಭ್ಯಗಳನ್ನ ನೀಡಬೇಕು.

– ಮುಖ್ಯವಾಹಿನಿಗೆ ಬಂದ ನಂತರ ಗೌರವದಿಂದ ನೋಡಬೇಕು.

– ಹೋರಾಟಗಳಲ್ಲಿ ಭಾಗಿಯಾದಾಗ ಅನುಮಾನದಿಂದ ನೋಡಬಾರದು

Leave a Reply

Your email address will not be published. Required fields are marked *