ರಾಜೀವ್ ಗಾಂಧಿ ವಸತಿ ನಿಗಮದ ನಿರ್ಧಾರ.
ಬೆಂಗಳೂರು : ಕೆಆರ್‌ಎಸ್ ಪಕ್ಷದ ಪ್ರಯತ್ನಕ್ಕೆ ಫಲವಾಗಿ, ಮುಖ್ಯಮಂತ್ರಿಗಳ ‘1 ಲಕ್ಷ ಬಹುಮಹಡಿ ಬೆಂಗಳೂರು ಮನೆ ಯೋಜನೆ’ಯಡಿ ಮನೆ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ಫಲಾನುಭವಿಗಳಿಗೆ ಮನೆಗಳ ಕೀಲಿ ಹಸ್ತಾಂತರಿಸಲು ರಾಜೀವ್ ಗಾಂಧಿ ವಸತಿ ನಿಗಮವು ಸಮ್ಮತಿ ಸೂಚಿಸಿದೆ.
ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರತಿನಿಧಿಗಳ ನಿಯೋಗವು ನೂರಾರು ಫಲಾನುಭವಿಗಳೊಂದಿಗೆ ನಿಗಮದ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿತು. ಈ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಫಲಾನುಭವಿಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಸ್ವಾಧೀನ ಪತ್ರ ಪಡೆದಿರುವವರಿಗೆ ತಕ್ಷಣವೇ ಮನೆಗಳ ಕೀಲಿ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
ಹಾಗೆಯೇ ನೋಂದಣಿ ಪ್ರಕ್ರಿಯೆ ಬಾಕಿ ಇರುವವರು ಅಗತ್ಯ ಅಫಿಡವಿಟ್ ಸಲ್ಲಿಸಿದ ತಕ್ಷಣ ಅವರಿಗೆ ಮನೆಗಳ ಕೀಲಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು. ಮುಂದಿನ 15 ದಿನಗಳೊಳಗಾಗಿ ಎಲ್ಲಾ ಬ್ಲಾಕ್‌ಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ನಿಗಮ ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, “2017ರಲ್ಲಿ ₹5.5 ರಿಂದ ₹6 ಲಕ್ಷಕ್ಕೆ ಘೋಷಿಸಲಾದ ಮನೆಗಳ ಬೆಲೆಯನ್ನು ಹಂತ ಹಂತವಾಗಿ ₹13.2 ಲಕ್ಷಕ್ಕೆ ಏರಿಸಿರುವುದು ಬಡವರ ಮೇಲೆ ಗಂಭೀರ ಆರ್ಥಿಕ ಹೊರೆ ಹಾಕಿದಂತಾಗಿದೆ. ಜೊತೆಗೆ, ಈ ಯೋಜನೆಯನ್ನು ‘ರೇರಾ’ (RERA) ಅಡಿಯಲ್ಲಿ ನೋಂದಾಯಿಸದೇ ಪಾರದರ್ಶಕತೆಯನ್ನು ನಿರ್ಲಕ್ಷಿಸಲಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ನೂರಾರು ಫಲಾನುಭವಿಗಳು ಉಪಸ್ಥಿತರಿದ್ದರು.
ಸಕಲ ಮೂಲಸೌಕರ್ಯಗಳೊಂದಿಗೆ ಮನೆಗಳ ಹಸ್ತಾಂತರ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಕೆಆರ್‌ಎಸ್ ಪಕ್ಷವು ಫಲಾನುಭವಿಗಳ ಪರವಾಗಿ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಲಾಯಿತು.
For More Updates Join our WhatsApp Group :




