ದರ್ಶನ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಹತ್ತಿರದಲ್ಲಂತೂ ಅವರು ಹೊರಗೆ ಬರುವುದು ಬಹುತೇಕ ಅಸಾಧ್ಯ ಎಂಬಂತಾಗಿದೆ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾದ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿದೆ. ಈ ಹಿಂದೆಯೇ ‘ಡೆವಿಲ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ.
‘ಡೆವಿಲ್’ ಸಿನಿಮಾ ಡಿಸೆಂಬರ್ 12ಕ್ಕೆ ಬದಲಾಗಿ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೆ ವಿಜಯಲಕ್ಷ್ಮಿ ದರ್ಶನ್, ‘ಡೆವಿಲ್’ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಇನ್ನಿತರರು ದರ್ಶನ್ ಅವರ ಅಭಿಮಾನಿಗಳೊಟ್ಟಿಗೆ ಸಭೆ ನಡೆಸಿದ್ದರು. ಸಭೆಯ ಬಳಿಕ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿ ಬಿಡುಗಡೆ ಆಗುತ್ತಿರುವುದಕ್ಕೆ ಸ್ಪಷ್ಟ ಕಾರಣವನ್ನು ತಿಳಿಸಿಲ್ಲ. ಬದಲಿಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಎಂದಷ್ಟೆ ಹೇಳಲಾಗಿದೆ. ಹಿಂದಿನ ದಿನಾಂಕದಂತೆ ಶುಕ್ರವಾರ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಒಂದು ದಿನ ಮುಂಚಿತವಾಗಿ ಎಂದರೆ ಗುರುವಾರದಂದು ಬಿಡುಗಡೆ ಆಗಲಿದೆ.
ಇತ್ತೀಚೆಗೆ ಹಲವು ಸಿನಿಮಾಗಳು ಈ ಮಾದರಿಯನ್ನು ಅನುಸರಿಸುತ್ತಿವೆ. ಶುಕ್ರವಾರದ ಬದಲಾಗಿ ಗುರುವಾರ ಬಿಡುಗಡೆ ಮಾಡಲಾಗುತ್ತದೆ. ಶುಕ್ರವಾರದಿಂದಲೇ ವೀಕೆಂಡ್ ಕಲೆಕ್ಷನ್ ಪ್ರಾರಂಭ ಆಗುತ್ತದೆ ಹಾಗೂ ರಿಲೀಸ್ ದಿನ ಅಭಿಮಾನಿಗಳು ಹೇಗೋ ಸಿನಿಮಾ ವೀಕ್ಷಿಸುತ್ತಾರೆ ಎಂಬುದು ಚಿತ್ರತಂಡಗಳ ಲೆಕ್ಕಾಚಾರ. ‘ಡೆವಿಲ್’ ಬಿಡುಗಡೆ ದಿನಾಂಕ ಬದಲಾಗುವುದರ ಹಿಂದೆಯೂ ಇದೇ ಕಾರಣ ಇರಬಹುದು ಎನ್ನಲಾಗುತ್ತಿದೆ.
For More Updates Join our WhatsApp Group :




