ಎಸ್‌ಎಫ್‌ಐ, ಎಬಿವಿಪಿ ಸೇರಿ ಎಲ್ಲ ಸಂಘಟನೆಗಳ ಬೆಂಬಲ – ಶಾಂತಿಯುತ ಚುನಾವಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾದ ಚುನಾವಣೆಗಳು ಅನಿವಾರ್ಯ ಮತ್ತು ಈಗಿನ ಕಾಲಘಟ್ಟದಲ್ಲಿ ಅವಶ್ಯಕ ಹಾಗಾಗಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ನಾಯಕತ್ವ ರೂಪಿಸಿಕೊಳ್ಳಲು ಅತ್ಯುತ್ತಮ ಹೆಜ್ಜೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಪ್ರಕ್ರಿಯೆ ಸಂಬಂಧ ಪಟ್ಟಂತೆ ಇಂದು ರಾಜ್ಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ಕಾಲೇಜು ಬೋಧಕ ಸಿಬ್ಬಂದಿ ಮತ್ತು ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಪ್ರತ್ಯೇಕವಾಗಿ ಮೂರು ಸುತ್ತಿನ ಮಾತುಕತೆ ನಡೆಸಲಾಯಿತು.
ವಿದ್ಯಾರ್ಥಿ ಸಂಘಟನೆ ಗಳೊಂದಿಗೆ ರಾಜ್ಯದ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಾದ ಎಸ್.ಎಫ್.ಐ, ಎನ್ ಎಸ್ ಯು ಐ, ಎಐಎಸ್ಓ, ಎಐಡಿಎಸ್ಓ, ಎಬಿವಿಪಿ ಹಾಗೂ ವಿದ್ಯಾರ್ಥಿ ಜನತಾದಳ ಸಂಘಟನೆಗಳೊಂದಿಗೆ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಸುಧೀರ್ಘ ಚರ್ಚೆ ನಡೆಸಿದರು.
ಬಹುಪಾಲು ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.ದಕ್ಷಿಣ ಭಾರತದ ಬಹುಪಾಲು ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗೆ ಚುನಾವಣೆಗಳು ನಡೆಯುತ್ತಿವೆ ಆದರೆ ಕರ್ನಾಟಕದಲ್ಲಿ ಚುನಾವಣೆಗಳನ್ನು ಎರಡು ದಶಕಗಳ ಹಿಂದೆ ನಿಷೇಧಿಸಲಾಗಿದೆ ಈಗ ಮತ್ತೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿರುವುದು ಸ್ವಾಗತ ಅರ್ಹ ಎಂದು ಅಭಿಪ್ರಾಯಪಟ್ಟರು.
ಈ ಬಗ್ಗೆ ಮತ್ತಷ್ಟು ಅಭಿಪ್ರಾಯಗಳನ್ನು ಕಲೆಹಾಕಿ ಸೂಕ್ತ ನಿಯಮಾವಳಿಗಳನ್ನ ರೂಪಿಸಿ ನಂತರವಷ್ಟೇ ಈ ಶೈಕ್ಷಣಿಕ ವರ್ಷದಲ್ಲಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಡಾಕ್ಟರ್ ಎಂ ಸಿ ಸುಧಾಕರ್ ಈ ಸಂದರ್ಭದಲ್ಲಿ ಹೇಳಿದರು. ಇಂದು ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಮನೋಜ್ ಕುಮಾರ್ ಮೀನಾ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
For More Updates Join our WhatsApp Group :




