ತುಮಕೂರಿನಲ್ಲಿ ಬೆಚ್ಚಿಬೀಳಿಸಿದ ಕೊಲೆ ಪ್ರಕರಣ.
ತುಮಕೂರು: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮದುವೆಯಾಗಿ ಮೂರು ತಿಂಗಳು ಕಳೆಯುವುದರ ಒಳಗೆ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಶಾಕಿಂಗ್ ವಿಚಾರ ತನಿಖೆ ವೇಳೆ ಬಯಲಾಗಿದೆ. ಪ್ರಕರಣ ಸಂಬಂಧ ಫರ್ಜಾನ (31), ಧನರಾಜ್ (24) ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಏನು?
ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷ ಕುಟುಂಬದವರ ನಿಶ್ಚಯದಂತೆ ಇದೇ ವರ್ಷ ಜನವರಿಯಲ್ಲಿ ಫರ್ಜಾನ ಎಂಬಾಕೆಯನ್ನ ವಿವಾಹವಾಗಿದ್ದ. ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ ಮನ್ಸೂರ್ ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲೆಂದು ಹೋದವ ನಾಪತ್ತೆಯಾಗಿದ್ದ. ಆ ಬಳಿಕ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದಾಗ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಚಿಕ್ಕಮಗಳೂರಿನ ಯುವಕರ ಗ್ಯಾಂಗ್ ಕೃತ್ಯ ಎಸಗಿರೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಟೆಕ್ನಿಕಲ್ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಆರಂಭದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಇನ್ನು ವಿವಾಹದ ಬಳಿಕ ಧನರಾಜ್ ಜೊತೆ ಫರ್ಜಾನಗೆ ಇದ್ದ ಸಂಪರ್ಕ ಕಡಿತಗೊಂಡಿತ್ತು. ಆದರೆ ಆತನಿಗಾಗಿ ಹೊಸ ಸಿಮ್ ಖರೀದಿ ಮಾಡಿದ್ದ ಫರ್ಜಾನ ಮತ್ತೆ ಧನರಾಜ್ನನ್ನು ಫೋನ್ ಮೂಲಕ ಸಂಪರ್ಕಿಸಿದ್ದಳು. ಮತ್ತೆ ತಾವು ಒಂದಾಗಬೇಕೆಂದು ಬಯಸಿ ಮನ್ಸೂರ್ ಕೊಲೆಗೆ ಪ್ಲ್ಯಾನ್ ಮಾಡಿದ್ದರು. ಅದರಂತೆ ದರ್ಶನ್ ಮುಖಾಂತರ ಮಾರ್ಚ್ 4ರಂದು ಗುಜರಿ ವಸ್ತುಗಳು ಇರೋದಾಗಿ ಹೇಳಿ ಮನ್ಸೂರ್ಗೆ ಕರೆ ಮಾಡಿ ಆರೋಪಿಗಳು ಕರೆಸಿಕೊಂಡಿದ್ದರು. ಆತ ಬರುತಿದ್ದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದರೂ, ಮನ್ಸೂರ್ಗೆ ದರ್ಶನ್ ಮಾಡಿದ್ದ ಕರೆಯಿಂದ ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :




