ಮಂಗಳೂರು : ವಳಚ್ಚಿಲ್ನಲ್ಲಿ ಮದುವೆ ಸಂಬಂಧ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನು ತನ್ನ ಚಿಕ್ಕಪ್ಪನ ಮೇಲೆ ಚೂರಿ ಇರಿತ ನಡೆಸಿ ಹತ್ಯೆ ಮಾಡಿದ ಭಯಾನಕ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇದರಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ವಳಚ್ಚಿಲ್ ನಿವಾಸಿ ಸುಲೈಮಾನ್ (60) ಮತ್ತು ಗಾಯಾಳುಗಳನ್ನು ರಿಯಾಜ್, ರಿಯಾಬ್ ಎಂದು ಗುರುತಿಸಲಾಗಿದೆ. ಆರೋಪಿ ಮುಸ್ತಾಕ್ ಸುಲೈಮಾನ್ನ ಅಣ್ಣನ ಮಗನಾಗಿದ್ದಾನೆ.
ಮುಸ್ತಾಕ್ಗೆ ಎಂಟು ತಿಂಗಳ ಹಿಂದೆ ಮದುವೆಯಾದಿತ್ತು. ಈ ಮದುವೆ ಸಂಧಾನದ ಏಜೆಂಟ್ ಆಗಿದ್ದ ಆತನ ಚಿಕ್ಕಪ್ಪ ಸುಲೈಮಾನ್, ಅಡ್ಡೂರಿನ ಯುವತಿಯನ್ನು ನೋಡಿ ಮದುವೆ ಮಾಡಿಸಿದ್ದರು. ಮದುವೆಯ ನಂತರ ಯುವತಿ ಪದೇಪದೇ ಗಂಡನ ಅನುಮತಿ ಇಲ್ಲದೇ ತಾಯಿ ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಮುಸ್ತಾಕ್ಗೆ ಅಸಮಾಧಾನವಾಗಿತ್ತು. ಹುಡುಗಿ ಬಗ್ಗೆ ಕೆಲವು ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಚಿಕ್ಕಪ್ಪನ ಮೇಲೂ ಆಕ್ರೋಶವಿತ್ತು.
ಗುರುವಾರ ಸಂಜೆ ಮುಸ್ತಾಕ್ ಮತ್ತು ಆತನ ಪತ್ನಿ ನಡುವೆ ಜಗಳ ಉಂಟಾಗಿತ್ತು. ಈ ಸಂದರ್ಭದಲ್ಲಿ ಚಿಕ್ಕಪ್ಪ ಸುಲೈಮಾನ್ ಮಧ್ಯಸ್ಥಿಕೆ ಯತ್ನಿಸಿದಾಗ, ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿತು. ಕೋಪದಲ್ಲಿ ಮುಸ್ತಾಕ್ ತನ್ನ ಮನೆಯಿಂದ ಚೂರಿ ತಂದು, ಸುಲೈಮಾನ್ ಹಾಗೂ ಆತನ ಇಬ್ಬರು ಮಕ್ಕಳಾದ ರಿಯಾಜ್ ಮತ್ತು ರಿಯಾಬ್ ಮೇಲೆ ಇರಿದಾನೆ. ಗಂಭೀರವಾಗಿ ಗಾಯಗೊಂಡ ಮೂವರನ್ನೂ ತಕ್ಷಣ ಅಡ್ಯಾರ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುಲೈಮಾನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸುವ ಕಾರ್ಯ ಚುರುಕಾಗಿಸಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.