ಕುಡಿಯುವ ನೀರಿಗಾಗಿ 419.50 ಕೋಟಿ ರೂ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯ.
ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಇಂದು ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಜರುಗಿತು.
ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟಂಬರ್ ತಿಂಗಳಲ್ಲಿ ಮಳೆ ಕಡಿಮೆ ನಿರೀಕ್ಷಿಸಲಾಗಿದೆ.
ಕುಡಿಯುವ ನೀರಿಗೆ ತೊಂದರೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ
ಕುಡಿಯುವ ನೀರಿಗೆ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ಇದಕ್ಕೆ ಹೊಣೆಯಾಗುತ್ತಾರೆ. ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.
•ಈ ಬಾರಿ ಎಪ್ರಿಲ್-ಜೂನ್ ಅವಧಿಯಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಗಾಳಿ ದಿನಗಳು ಕಂಡು ಬರುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಬೇಕು ಎಂದರು.
For More Updates Join our WhatsApp Group :




