ಜೈಲಿನಲ್ಲೂ ಮಕ್ಕಳಿಗೆ ಶಿಕ್ಷಣ-ಸಂರಕ್ಷಣೆ: ಪರಪ್ಪನ ಅಗ್ರಹಾರದಲ್ಲಿ ವಿಶೇಷ ಶಿಶುಪಾಲನಾ ಕೇಂದ್ರ.!
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭವಾಗಿದ್ದು, ಇದು ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ತಾಯಂದಿರು ಶಿಕ್ಷೆ ಅನುಭವಿಸುವ ವೇಳೆ ಅವರೊಂದಿಗೆ ಜೈಲಿನಲ್ಲೇ ಬದುಕಬೇಕಾಗಿರುವ ಆರು ವರ್ಷದೊಳಗಿನ ಮಕ್ಕಳ ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕುವ ಉದ್ದೇಶದಿಂದ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ (DCP) ಈ ಕೇಂದ್ರವನ್ನು ಆರಂಭಿಸಿದೆ.
ಜೈಲಿನ ವಾತಾವರಣ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯಲು ವಿಶೇಷ ಶಿಕ್ಷಣ ಮತ್ತು ಆರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಅಂಕಿಅಂಶ, ಪ್ರಾಸಬದ್ಧ ಹಾಡುಗಳು, ಚಿತ್ರಕಲೆ ಸೇರಿದಂತೆ ವಿವಿಧ ಸೃಜನಶೀಲ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ಜೊತೆಗೆ ಗುಡ್ ಟಚ್, ಬ್ಯಾಡ್ ಟಚ್ ಕುರಿತು ಅರಿವು ಮೂಡಿಸುವ ಮೂಲಕ ಮಕ್ಕಳ ಸುರಕ್ಷತೆಯ ಮೇಲೂ ಗಮನ ಹರಿಸಲಾಗಿದೆ.
ಮಕ್ಕಳಲ್ಲಿ ಶಿಸ್ತು, ಸಾಮಾಜಿಕ ಕೌಶಲ ಹಾಗೂ ವ್ಯಕ್ತಿತ್ವ ವಿಕಸನ ಬೆಳೆಸಲು ಹಿರಿಯರಿಗೆ ಗೌರವ ನೀಡುವುದು, ಸರಿಯಾದ ಊಟದ ಕ್ರಮಗಳು ಸೇರಿದಂತೆ ಹಲವು ಅಭ್ಯಾಸಗಳನ್ನು ಕಲಿಸಲಾಗುತ್ತಿದೆ. ಜೈಲು ಕೈಪಿಡಿ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಆರು ವರ್ಷದವರೆಗೆ ಮಕ್ಕಳಿಗೆ ತಾಯಿಯೊಂದಿಗೆ ಇರಲು ಅವಕಾಶವಿದ್ದು, ನಂತರ ಕುಟುಂಬದವರು ಜವಾಬ್ದಾರಿ ವಹಿಸದಿದ್ದರೆ ಎನ್‌ಜಿಒಗಳ ಮೂಲಕ ಶಿಕ್ಷಣ ಮುಂದುವರಿಸುವ ವ್ಯವಸ್ಥೆಯೂ ಇದೆ.
ಪ್ರಸ್ತುತ ಒಂಬತ್ತು ಮಕ್ಕಳು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಅವರಲ್ಲಿ ಮೂವರು ವಿದೇಶಿ ಪ್ರಜೆಗಳ ಮಕ್ಕಳಾಗಿದ್ದಾರೆ. ಗೋಡೆಗಳ ಮೇಲೆ ವರ್ಣಚಿತ್ರಗಳು, ಆಟದ ಸ್ಥಳ, ಆಧುನಿಕ ಶೌಚಾಲಯ ಮತ್ತು ಕೈತೊಳೆಯುವ ವ್ಯವಸ್ಥೆಗಳನ್ನು ಕಲ್ಪಿಸಿ ಜೈಲಿನ ವಾತಾವರಣವನ್ನು ಮಕ್ಕಳ ಸ್ನೇಹಿ ಕೇಂದ್ರವನ್ನಾಗಿ ರೂಪಿಸಲಾಗಿದೆ.
For More Updates Join our WhatsApp Group :




