ಸರ್ಕಾರಿ ನರ್ಸಿಂಗ್ ಕೆಲಸದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ..!

ಸರ್ಕಾರಿ ನರ್ಸಿಂಗ್ ಕೆಲಸದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ..!

ESI ಆಸ್ಪತ್ರೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ: ಲಕ್ಷ ಲಕ್ಷ ಹಣ ಪಡೆದು ಪರಾರಿಯಾದ ಆರೋಪ

ಕಲಬುರಗಿ: ಕಲಬುರಗಿಯಲ್ಲಿ ಸರ್ಕಾರಿ ನರ್ಸಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಹತ್ತಾರು ಯುವಕ-ಯುವತಿಯರಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿಗೆ ಸಂಬಂಧಿಸಿದ ಪ್ರದೀಪ್ ಎಂಬಾತ, ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ಅನೇಕ ಮಂದಿಯಿಂದ ಹಣ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿ ಹುದ್ದೆಗೆ ₹2 ಲಕ್ಷದಿಂದ ₹4 ಲಕ್ಷದವರೆಗೆ ಹಣ ಪಡೆದು, ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದೇನೆ ಎಂದು ನಂಬಿಕೆ ಮೂಡಿಸಿದ್ದಾನೆ ಎನ್ನಲಾಗಿದೆ. ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಹಲವರು ತಮ್ಮ ಉಳಿತಾಯದ ಹಣವನ್ನು ನೀಡಿ ಮೋಸಹೋಗಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಕೆಲಸ ಸಿಗದೇ, ಹಣವೂ ಮರಳಿ ಸಿಗದೆ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಣ ವಾಪಸ್ ಕೇಳಿದವರಿಗೆ “ಇನ್ನೂ ಸ್ವಲ್ಪ ದಿನ ಕಾಯಿರಿ” ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಕೆಲವರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಯತ್ನಿಸಿದಾಗ, ಉತ್ತರ ನೀಡುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಪ್ರಕರಣದಲ್ಲಿ ಇಎಸ್ಐ ಆಸ್ಪತ್ರೆ ಆಡಳಿತ ಮಂಡಳಿಯವರ ಪಾತ್ರವೂ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ ಆಸ್ಪತ್ರೆ ಮುಂಭಾಗದಲ್ಲೇ ಪರೀಕ್ಷೆ ನಡೆಸಿ, ಹಣಕಾಸಿನ ವ್ಯವಹಾರ ನಡೆದಿರುವುದಾಗಿ ವಂಚನೆಗೊಳಗಾದವರು ಆರೋಪಿಸಿದ್ದಾರೆ.

ಸದ್ಯ ಮೋಸಹೋಗಿರುವ ಯುವಕರು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ಸರ್ಕಾರಿ ಉದ್ಯೋಗದ ಆಸೆ ಬಂಡವಾಳ ಮಾಡಿಕೊಂಡು ವಂಚನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *