ಪುಂಡರ ಹಾವಳಿಗೆ ಬೆಚ್ಚಿ ಬಿದ್ದ ತುಮಕೂರು, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ
ತುಮಕೂರು: ಹುಡುಗಿ ಸಹಾಯಕ್ಕೆ ಬಂದ ಇಬ್ಬರ ಮೇಲೆ ಹುಡುಗಿ ಚುಡಾಯಿಸಿದಾತ ಮನಸೋ ಇಚ್ಚೆ ಲಾಂಗ್ ನಿಂದ ಹಲ್ಲೆ ಮಾಡಿರುವ ಘಟನೆ ತುಮಕೂರು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಯುವತಿಗೆ ನಿಂದನೆ ಮಾಡುತ್ತಿದ್ದ ಯುವಕರ ವಿರುದ್ಧ ಹಾಗೂ ಯುವತಿ ಪರ ಮಾತನಾಡಿದ್ದಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಈ ಘಟನೆ ನಡೆದಿದೆ.
ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.
ಯುವತಿಯನ್ನು ತಳ್ಳಿದ ಯುವಕ:- ವಿಲೀಂಗ್ ಮಾಡುತ್ತಿದ್ದ ಇರ್ಫಾನ್ ಬೈಕ್ ಗೆ ಯುವತಿ ಅಡ್ಡ ಬಂದ ಹಿನ್ನೆಲೆಯಲ್ಲಿ ಕೊಂಚ ಗಲಾಟೆ ಶುರುವಾಗಿದೆ. ಈ ವೇಳೆ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದು ಯುವತಿಯನ್ನ ಕೆಳಗೆ ತಳ್ಳಿ, ಕೆಳಗೆ ಬಿದ್ದಿದ್ದ ಯುವತಿಯನ್ನ ಚುಡಾಯಿಸಿ ಜಗಳ ಮಾಡಿದ್ದ.
ಈ ವೇಳೆ ಯುವತಿಯ ರಕ್ಷಣೆಗೆ ಮತ್ತೊಬ್ಬ ಇರ್ಫಾನ್ ಮತ್ತು ಸಾಧಿಕ್ ಎಂಬವವರು ಬಂದಿದ್ದರು. ಆರೋಪಿ ಇರ್ಫಾನ್ ಗೆ ಬೈದು ಬುದ್ದಿ ಹೇಳಿ, ಯುವತಿಯ ರಕ್ಷಣೆ ಮಾಡಿದ್ದಾರೆ.
ಸ್ನೇಹಿತರೊಂದಿಗೆ ಅಟ್ಯಾಕ್:- ಇದ್ರಿಂದ ಕುಪಿತಗೊಂಡ ಇರ್ಫಾನ್ ಸ್ನೇಹಿತರೊಂದಿಗೆ ಆಗಮಿಸಿ ಸಾಧಿಕ್ – ಇರ್ಫಾನ್ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ, ಕೈ, ತಲೆಗೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ
ಇರ್ಫಾನ್ (30) ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಮಾಡಿರುವ ಇರ್ಫಾನ್ ಮತ್ತು ಆತನ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಿತಿಮೀರಿದ ಪುಂಡರ ಹಾವಳಿ: ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಪುಂಡರ ಹಾವಳಿ ತಡೆಯಲು ಜಯನಗರ ಪೊಲೀಸರು ವಿಫಲವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.