ಸ್ಕಾಲರ್ಶಿಪ್, ಹಾಸ್ಟೆಲ್ ಸಮಸ್ಯೆಗಳಿಗೆ ವಿದ್ಯಾರ್ಥಿಗಳ ಆಕ್ರೋಶ; ಎನ್ಎಸ್ಯುಐ ನೇತೃತ್ವದಲ್ಲಿ ಗಲಾಟೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಉಪಕುಲಪತಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣವು ರಣರಂಗವಾಗಿ ಮಾರ್ಪಟ್ಟಿದ್ದು, NSUI ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ವೇಳೆ ಕುಲಪತಿಗಳ ಕಚೇರಿಯಲ್ಲಿದ್ದ ಕುರ್ಚಿ ಮತ್ತು ಪಾಟ್ಗಳನ್ನು ದ್ವಂಸ ಮಾಡಲಾಗಿದೆ. ಅಲ್ಲದೆ, ಕುಲಪತಿ ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು ತಮ್ಮ ಅಸಮಾಧಾನ ಹೊರಹಾಕಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಉಪಕುಲಪತಿಗಳು ಹೇಳೋದೇನು?
ಇನ್ನು ಘಟನೆ ಬಗ್ಗೆ ಪ್ರತಿಕ್ರಿಕೆ ನೀಡಿರುವ ಉಪಕುಲಪತಿ ಶರತ್ ಅನಂತಮೂರ್ತಿ, ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಂಬಿಎ ವಿದ್ಯಾರ್ಥಿಗಳಿಗೆ ಮಾರಾಟದ ಮಳಿಗೆ ಆಯೋಜನೆ ಮಾಡಲಾಗಿದ್ದು, ಅಲ್ಲಿದ್ದ ನನಗೆ ಕುಲಪತಿ ಕಚೇರಿಯಿಂದ ಕರೆ ಬಂತು. ಯಾರೋ ಬಂದು ಕಚೇರಿಯ ಪಾಟ್ಗಳನ್ನು ಒಡೆದು ಹಾಕುತ್ತಿದ್ದಾರೆ. ನುಗ್ಗಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದೇನೆ. ಆ ವೇಳೆ ನನ್ನ ವಿರುದ್ಧ ಘೋಷಣೆ ಕೂಗಿ ಘೇರಾವ್ ಹಾಕಿದ್ದಾರೆ. ಸ್ವಲ್ಪ ತಳ್ಳಾಟದ ಯತ್ನವೂ ನಡೆದಿದೆ. ಕುವೆಂಪು ಅವರ ಭಾವಚಿತ್ರದ ಎದುರೇ ಮಡಿಕೆಗಳನ್ನ ಒಡೆಯಲಾಗಿದ್ದು, ಒಂದು ಹಂತಕ್ಕೆ ಅವರಿಗೇ ಅವಮಾನ ಮಾಡುವ ಯತ್ನವನ್ನು ನಡೆಸಲಾಗಿದೆ. ಪ್ರತಿಭಟನೆ ನಡೆಸಿದವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಸಮಸ್ಯೆ ಏನು ಎಂದೂ ಸರಿಯಾಗಿ ಅವರು ಹೇಳಿಲ್ಲ. ಇದೇ ಪ್ರತಿಭಟನಾ ನಿರತರ ಪೈಕಿ ನಾಲ್ವರು ಈ ಹಿಂದೆಯೂ ಬಂದಿದ್ದರು. ಅವರ ಮನವಿಯನ್ನು ನಾನು ಸ್ವೀಕರಿಸಿದ್ದೆ. ಇಲ್ಲಿ ಬಂದು ದಾಂಧಲೆ ನಡೆಸಿದವರು ವಿದ್ಯಾರ್ಥಿಗಳಾ ಎಂಬುದು ಗೊತ್ತಿಲ್ಲ. ಘಟನೆ ಹಿಂದೆ ಯಾರೋ ಬೇರೆಯವರು ಇದ್ದಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
For More Updates Join our WhatsApp Group :




