ಈ ಬಾರಿಯ ಬೇಸಿಗೆ ನಿರ್ವಹಣೆಯ ಸೌಕರ್ಯಗಳ ಪರಿಶೀಲನೆ
ಬೆಂಗಳೂರು : ಬೆಂಗಳೂರು ನಗರದಾದ್ಯಂತ ಪ್ರಸ್ತುತ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಎಲ್ಲಾದರೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ತಕ್ಷಣವೇ ಸ್ಪಂದಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ .
ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೊಂದರೆ ಅನುಭವಿಸಿದ್ದ ಕನಕಪುರ ರಸ್ತೆ ಭಾಗದ ಬನಗಿರಿನಗರ, ಭುವನೇಶ್ವರಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಇಂದು ಖುದ್ದು ಭೇಟಿ ನೀಡಿದ ಅವರು, ಪ್ರಸ್ತುತ ನೀರಿನ ಸರಬರಾಜು ಪರಿಸ್ಥಿತಿಯ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ಬಾರಿಯ ಬೇಸಿಗೆಯಲ್ಲಿ ನೀರಿನ ಪೂರೈಕೆ ಸುಧಾರಿಸಿರುವ ಬಗ್ಗೆ ಸ್ಥಳೀಯರು ಅಧ್ಯಕ್ಷರ ಬಳಿ ಸಂತಸ ಹಂಚಿಕೊಂಡರು. *ಬನಗಿರಿ ನಗರದ ನಿವಾಸಿ ಸುಬ್ಬಮ್ಮ ಎಂಬುವವರು ಮಾತನಾಡಿ,* “ಕಳೆದ ಬೇಸಿಗೆಯಲ್ಲಿ ನೀರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದರೆ ಈ ಬಾರಿ ಜಲಮಂಡಳಿಯಿಂದ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸಿರುವುದರಿಂದ ನಮಗೆ ಯಾವುದೇ ಸಮಸ್ಯೆಯಾಗಿಲ್ಲ,” ಎಂದು ಹರ್ಷ ವ್ಯಕ್ತಪಡಿಸಿದರು.
ಈ ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ಜಲಮಂಡಳಿಯ ಮುಖ್ಯ ಅಭಿಯಂತರರಾದ ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
For More Updates Join our WhatsApp Group :




