ಕುಣಿಗಲ್ || ವಿಷ ಜಂತು ಆವಾಸ ಸ್ಥಾನವಾದ Toilets : ಬಹಿರ್ದೆಸೆಗೆ ಪರದಾಡುತ್ತಿರುವ Citizens

ಕುಣಿಗಲ್ || ವಿಷ ಜಂತು ಆವಾಸ ಸ್ಥಾನವಾದ Toilets : ಬಹಿರ್ದೆಸೆಗೆ ಪರದಾಡುತ್ತಿರುವ Citizens

ಕುಣಿಗಲ್: ತಾಲೂಕಿನ ಅಮೃತೂರು ಬಸ್ ನಿಲ್ದಾಣದ ಸಮೀಪ ಗ್ರಾಮ ಪಂಚಾಯ್ತಿ ವತಿಯಿಂದ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯ ಹೆಸರಿಗೆ ಮಾತ್ರ ಸೀಮಿತವಾಗಿದೆ. 20 ವರ್ಷ ಕಳೆದರೂ ಶೌಚಾಲಯ ಉದ್ಘಾಟನೆಯಾಗದೆ ಶೌಚಾಲಯ ವಿಷ ಜಂತುಗಳ ಆವಾಸ್ಥಾನÀವಾಗಿದ್ದು,  ಬಹಿರ್ದೆಸೆಗೆ ನಾಗರಿಕರು ಪರದಾಡುವಂತಾಗಿದೆ.    

   ಅಂದಿನ ಶಾಸಕ ವೈ.ಕೆ.ರಾಮಯ್ಯ ಅವರು ಅಮೃತೂರು ಗ್ರಾಮದಲ್ಲಿ ಕೆಎಸ್ಆರ್ಟಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕರ ಉಪಯೋಗಕ್ಕಾಗಿ 2001ರಲ್ಲಿ ಸುಲಭ ಶೌಚಾಲಯವನ್ನು ಮಂಜೂರು ಮಾಡಿಸಿ ನಿರ್ಮಿಸಿದ್ದರು. ಆದರೆ ಈತನಕ ಗ್ರಾಪಂ, ತಾಪಂ ನಿರ್ಲಕ್ಷ್ಯದಿಂದ ಆ ಶೌಚಾಲಯ ಉದ್ಘಾಟನೆ ಭಾಗ್ಯವನ್ನೆ ಕಂಡಿಲ್ಲ,  ವೈ.ಕೆ.ರಾಮಯ್ಯ ಬಳಿಕ ಶಾಸಕರಾಗಿ ಬಂದು ಡಿ.ನಾಗರಾಜಯ್ಯ, ಬಿ.ಬಿ.ರಾಮಸ್ವಾಮಿಗೌಡ ಹಾಗೂ ಡಾ.ಹೆಚ್.ಡಿ.ರಂಗನಾಥ್  ಸೇರಿ ಯಾರೊಬ್ಬರು ಅಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶ ನೀಡಿ ಶೌಚಾಲಯ ಅವ್ಯವಸ್ಥೆ ಸರಿಪಡಿಸುವಲ್ಲಿ ವಿಫಲಗೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅಮೃತೂರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸಿ.ಎಸ್.ನವೀನ್ಕುಮಾರ್ ಮಾತನಾಡಿ, ಯಾವ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಗೊತ್ತಿಲ್ಲ,  ಶೌಚಾಲಯಕ್ಕೆ ನೀರಿನ ಸಂಪರ್ಕವೇ ಕಲ್ಪಿಸಿರುವುದಿಲ್ಲ,  ಈಗ 15 ನೆ ಹಣ ಕಾಸು ಯೋಜನೆಯಡಿಯಲ್ಲಿ ಪೈಪ್ ಲೈನ್ ಕಾಮಗಾರಿ ಕೈಗೆತ್ತ್ತಿಕೊಂಡು ನೀರಿನ ಸಂಪರ್ಕ ಕಲ್ಪಿಸಿ ವಾರದ ಒಳಗೆ ಸಾರ್ವಜನಿಕರ ಉಪಯೋಗಕ್ಕೆ ಕಲ್ಪಿಸಲಾಗುವುದು.

  ಅಮೃತೂರು ಗ್ರಾಪಂ ಮಾಜಿ ಉಪಾಧ್ಯಕ್ಷ  ಕೆ.ಶ್ರೀನಿವಾಸ್ ಮಾತನಾಡಿ, ಅಮೃತೂರು ಹೋಬಳಿಯ ಮುಖ್ಯ ಕೇಂದ್ರದಲ್ಲಿ ನಾಗರಿಕರ ಅನುಕೂಲಕ್ಕಾಗಿ ಕಳೆದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸಾರ್ವಜನಿಕ ಶೌಚಾಲಯವು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಉಪಯೋಗ ಇಲ್ಲದಂತಾಗಿದೆ. ಈಗ ಕಾಟಾಚಾರಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ, ಕೂಡಲೇ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು.

 ಅವ್ಯವಸ್ಥೆ: ಈ ಸ್ಥಳದಿಂದ ಬೆಂಗಳೂರು, ಮಾಗಡಿ, ತುಮಕೂರು, ಕುಣಿಗಲ್, ಮದ್ದೂರು, ಮಂಡ್ಯ, ಮೈಸೂರು, ಎಡಿಯೂರು ಮೊದಲಾದ ಊರುಗಳಿಗೆ ನಿತ್ಯ ಬಸ್ ಸಂಚರಿಸುತ್ತಿವೆ. ತಮ್ಮ ಊರುಗಳಿಗೆ ಹೋಗಲು ಇಲ್ಲಿಗೆ ಬಂದು ಬಸ್ಗೆ ಕಾಯುವ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಶೌಚಾಲಯವಿಲ್ಲದೆ ಮೂತ್ರ ಮತ್ತು ಮಲವಿಸರ್ಜನೆಗೆ ತೀವ್ರ ತೊಂದರೆ ಉಂಟಾಗಿದೆ,   ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಒಳಗೆ ನಿರ್ಮಿಸಿರುವ ಶೌಚಾಲಯಕ್ಕೆ   ಡಿ.ಡಿ.ಪೌಡರ್, ಫಿನಾಯಲ್ ಸಿಂಪಡಿಸದ ಕಾರಣ ದುರ್ವಾಸನೆಯಿಂದ ಕೂಡಿದೆ. ಸೊಳ್ಳೆ, ನೊಣಗಳ ಉಪಟಳ ಜೋರಾಗಿ ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು, ಶೌಚಾಲಯ ಇದ್ದೂ ಇಲ್ಲದಂತಾಗಿದೆ.     

  ಶೌಚಾಲಯಕ್ಕೆ ಇಲ್ಲ ನೀರಿನ ಸಂಪರ್ಕ: ಶೌಚಾಲಯ ನಿರ್ಮಾಣಗೊಂಡು ಸುಮಾರು ಎರಡು ದಶಕ ಕಳೆದರು ಈವರೆಗೂ ಅಧಿಕಾರಿಗಳು ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂಬುದು ಗ್ರಾಮದ ಸಾರ್ವಜನಿಕರ ಆರೋಪವಾಗಿದೆ. 

  ವ್ಯಾಪಾರಿಗಳು, ನಾಗರಿಕರಿಗೆ ಬೇಸರ:  ಹೆಸರಿಗೆ ಮಾತ್ರ  ಶೌಚಾಲಯ, ಬಸ್ ಇಳಿದು ಪ್ರಯಾಣಿಕರು ನಿಸರ್ಗ ಕರೆಗೆಂದು ಅಲ್ಲಿಗೆ ಓಡಿ ಹೋದರೆ ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತದೆ. ಪ್ರಯಾಣಿಕರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡೇ ಇಲ್ಲಿ, ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಈ ಸಂಬಂಧ ವ್ಯಾಪಾರಿಗಳು ಹಾಗೂ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಅವ್ಯವಸ್ಥೆಯ ಅಗರ : ಸರ್ಕಾರ ಬಯಲು ಬಹಿರ್ದೆಸೆ ತಪ್ಪಿಸಿ ನಾಗರಿಕರಿಗೆ ಉತ್ತಮ ಶೌಚಾಲಯ ನಿರ್ಮಾಣಕ್ಕೆ ನೂರಾರು ಕೋಟಿ ರೂ. ಖರ್ಚು ಮಾಡಿ ಶೌಚಾಲಯ ನಿರ್ಮಿಸುತ್ತಿದೆ. ಆದರೆ, ಶೌಚಾಲಯ ನಿರ್ವಹಣೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಶೌಚಾಲಯಗಳು ಅಧೋಗತಿಗೆ ತಲುಪಿವೆ. ಅಮೃತೂರು ಗ್ರಾಮದ ಶೌಚಾಲಯ ಉದಾಹರಣೆಯಾಗಿದೆ.

  ಕಾಟಾಚಾರದ ಸ್ವಚ್ಛತೆ ಗಾಂಧಿಗೆ ಅಪಮಾನ: ಗಾಂಧಿ ಹೆಸರಿನಲ್ಲಿ ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮ ನಡೆಸಿ ನಾಗರಿಕರಿಗೆ ಅರಿವು ಮೂಡಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಆದರೆ, ಗಾಂಧಿ ಕಂಡ ಕನಸು ನನಸು ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ಸ್ವಚ್ಛತಾ ಆಂದೋಲನಕ್ಕೆ ಸರ್ಕಾರ ಆದೇಶ ನೀಡಬೇಕಾಗಿದೆ. ಕಾಟಾಚಾರಕ್ಕೆ ಸ್ವಚ್ಛತಾ ಕಾರ್ಯಕ್ರಮ ನಡೆಸುವುದು ಗಾಂಧಿಗೆ ಮಾಡಿದ ಅಪಮಾನವಾಗಿದೆ.

Leave a Reply

Your email address will not be published. Required fields are marked *