ವಿಜಯೇಂದ್ರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬೇಡಿ! ಯತ್ನಾಳ್ಗೆ ಹಾಲಪ್ಪ ವಾರ್ನಿಂಗ್

ವಿಜಯೇಂದ್ರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬೇಡಿ! ಯತ್ನಾಳ್ಗೆ ಹಾಲಪ್ಪ ವಾರ್ನಿಂಗ್

ಬೆಂಗಳೂರು: ಹೈಕಮಾಂಡ್ನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನನ್ನೇ ಪ್ರಶ್ನಿಸಿದಂತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ (Haratalu Halappa) ಹೇಳಿದ್ದಾರೆ. ಮಲ್ಲೇಶ್ವರದ (Malleshwaram) ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ (BJP) ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರರ (BY Vijayendra) ಬಗ್ಗೆ ಪ್ರಸ್ತಾಪ ಮಾಡುತ್ತಾರೆ.

ಅನಗತ್ಯವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ಅನುಭವ ಇಲ್ಲ; ಚಿಕ್ಕವರು ಎಂದೆಲ್ಲ ಮಾತನಾಡುತ್ತಾರೆ ಎಂದು ಟೀಕಿಸಿದರು.

ಯತ್ನಾಳ್ ಮಾತಿನಲ್ಲೇ ಗೊಂದಲ

ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಒಪ್ಪುವುದಿಲ್ಲ ಎನ್ನುತ್ತಾರೆ. ಯತ್ನಾಳ್ರಲ್ಲೇ ಒಂದಷ್ಟು ಗೊಂದಲಗಳಿವೆ. ವಿಜಯೇಂದ್ರರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಯವರ ಸಲಹೆ ಪಡೆದು ನೇಮಕ ಮಾಡಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಅವರದೇ ಆದ ರೀತಿಯಲ್ಲಿ ಸರ್ವೇ ಮಾಡಿಸಿ ಅಭಿಪ್ರಾಯ ಪಡೆದಿದ್ದಾರೆ. ಸ್ವಲ್ಪ ಮಟ್ಟಿಗೆ ಪರಿವಾರದ ಸಲಹೆಯನ್ನೂ ಕೇಳಿರುತ್ತಾರೆ ಎಂದರು.

ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ

ಭಿನ್ನಾಭಿಪ್ರಾಯ ಇದ್ದರೆ ದೆಹಲಿಗೆ ಹೋಗಿ ಹೈಕಮಾಂಡನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು. ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಆಗ್ರಹಿಸಿದರು. ಹೀಗೆ ರಸ್ತೆಯಲ್ಲಿ, ಹೋದಲ್ಲಿ ಬಂದಲ್ಲಿ ಯಾವ್ಯಾವುದೋ ಸಭೆಗೆ ಹೋದಲ್ಲಿ ಮಾತನಾಡುವುದು ಸರಿಯಲ್ಲ. ಅವರು ನಮ್ಮ ಪಕ್ಷದ ಮುಖಂಡರು. ಈಶ್ವರಪ್ಪನವರು ನಮ್ಮ ಪಕ್ಷ ಬಿಟ್ಟು ಹೋದವರು. ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿಯಲ್ಲಿ ಇದ್ದುಕೊಂಡು ಈಶ್ವರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಾರೆ ಎಂದು ಆರೋಪಿಸಿದರು.

ವಿಜಯೇಂದ್ರ ಕಿರಿಯರಾಗಿರುವುದು ಹೇಗೆ?

ರಾಜ್ಯಾಧ್ಯಕ್ಷರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವ ಉದ್ದೇಶ ಯತ್ನಾಳರದ್ದು. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು. ಹಿಂದೆ 42-44 ವರ್ಷದ ಎ.ಕೆ.ಸುಬ್ಬಯ್ಯನವರು ಅಧ್ಯಕ್ಷರಾಗಿದ್ದರು. ಸ್ವತಃ ಯಡಿಯೂರಪ್ಪನವರು ಅಧ್ಯಕ್ಷರಾದಾಗ ಅವರಿಗೆ 48 ವರ್ಷ; ಈಗ ವಿಜಯೇಂದ್ರರಿಗೆ 49-50 ವರ್ಷ. ಇವರು ಕಿರಿಯರಾಗುವುದು ಹೇಗೆ ಎಂದು ಹರತಾಳು ಹಾಲಪ್ಪ ಅವರು ಪ್ರಶ್ನೆಯನ್ನು ಮುಂದಿಟ್ಟರು.

ಅಗತ್ಯವಿದ್ದರೆ ಹೈಕಮಾಂಡ್ ಭೇಟಿ

ಯತ್ನಾಳರು ಕೇಂದ್ರ ಸಚಿವರಾದಾಗ ಅವರಿಗೆ ಎಷ್ಟು ವರ್ಷ? ಅವರು ಆಗ 40 ವರ್ಷದ ಆಸುಪಾಸಿನಲ್ಲಿದ್ದರು. ಆಗ ಹಿರಿಯರು ಇರಲಿಲ್ಲವೇ? ಒಂದು ಸಾರಿ ತಾವೇನು ಎಂದು ತಮ್ಮ ಬಗ್ಗೆ ಯೋಚಿಸುವುದಿಲ್ಲ. ವಿಜಯೇಂದ್ರ ಒಬ್ಬ ಯುವ ಮುಖಂಡ, ಬೆಳೆಯುತ್ತಿದ್ದಾರೆ; ಯಾಕೆ ಆ ಥರ ತಿಳಿದುಕೊಳ್ಳಬಾರದು ಎಂದು ವಿನಂತಿಸುವುದಾಗಿ ಹೇಳಿದರು. ಇದೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಮುಂದೆ ಅಗತ್ಯವಿದ್ದರೆ ಅಧಿಕೃತವಾಗಿ ನಾವು ಹೋಗಿ ಭೇಟಿ ಮಾಡಿ ಮಾತನಾಡುತ್ತೇವೆ ಎಂದರು.

ಸಿದ್ದರಾಮಯ್ಯರನ್ನು ತುದಿಗಾಲಲ್ಲಿ ನಿಲ್ಲಿಸಿದ್ದಾರೆ

ವಿಜಯೇಂದ್ರರು ರಾಜ್ಯಾಧ್ಯಕ್ಷರಾದ ಬಳಿಕ ಈ ಸರಕಾರ, ಸಿದ್ದರಾಮಯ್ಯರಂಥ ದೊಡ್ಡ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಹೈಕಮಾಂಡಿನ ಮಾರ್ಗದರ್ಶನ- ಸಲಹೆ ಪಡೆದು ಪಕ್ಷ ಸಂಘಟಿಸಿದ್ದಾರೆ. ವಿಪಕ್ಷ ನಾಯಕರು ಲೋಕಸಭಾ ಸದಸ್ಯರು, ಪ್ರಮುಖರ ಸಲಹೆ ಪಡೆದು, ಸಮಯ ಕೊಟ್ಟು ಪಾದಯಾತ್ರೆ ನಡೆಸಿದ್ದಾರೆ. ಲಕ್ಷಾಂತರ ಜನರು ಭಾಗವಹಿಸಿದ್ದ ಅಭೂತಪೂರ್ವ ಹೋರಾಟ ಅದಾಗಿತ್ತು ಎಂದು ಹರತಾಳು ಹಾಲಪ್ಪ ಅವರು ವಿಶ್ಲೇಷಣೆಯನ್ನು ಮುಂದಿಟ್ಟರು.

ಹಗಲು ರಾತ್ರಿ ಪಕ್ಷಕ್ಕಾಗಿ ಕೆಲಸ

ಹಗಲು ರಾತ್ರಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಬೇಕು? ವಿಜಯೇಂದ್ರರು ಅಧ್ಯಕ್ಷರಾದ ಬಳಿಕ ಯುವಪೀಳಿಗೆ ಯಾವ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿದೆ ಎಂಬುದನ್ನು ಜನರು, ಹೈಕಮಾಂಡ್ ಗಮನಿಸಿದ್ದಾರೆ ಎಂದರು.

ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರೋ ಯತ್ನಾಳ್

ನಳಿನ್ಕುಮಾರ್ ಕಟೀಲ್ ಅವರು 52-53 ವರ್ಷವಿದ್ದಾಗ ಅಧ್ಯಕ್ಷರಾದರು. ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಈಗ ಡಿಸಿಎಂ ಆಗಿದ್ದಾರೆ. ಆಗ ಅವರಿಗೆ 40ರ ಆಸುಪಾಸು ವರ್ಷ ಇತ್ತು ಎಂದು ಗಮನ ಸೆಳೆದರು. ಗೋವಾದ ಸಿಎಂ ಸಾವಂತ್ ಅವರು ಹಿಂದೆ ರಾಜ್ಯ ಅಧ್ಯಕ್ಷರಾಗಿದ್ದಾಗ 45ರ ಆಸುಪಾಸು ಇದ್ದವರು ಎಂದು ತಿಳಿಸಿದರು. ಇದನ್ನು ಅರ್ಥ ಮಾಡಿಕೊಳ್ಳಬೇಕು. ತಾವು ಕಿರಿಯ ಪ್ರಾಯದಲ್ಲಿ ಕೇಂದ್ರ ಸಚಿವರಾಗಿದ್ದು ಮರೆತುಹೋಯಿತೇ ಎಂದು ಪ್ರಶ್ನಿಸಿದರು. ಅವರ ಇಲ್ಲಸಲ್ಲದ ಮಾತಿನಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ ಎಂದು ತಿಳಿಸಿದರು.

ಅವರ ಭಾಷೆಯಲ್ಲೇ ಉತ್ತರ ಕೊಡುತ್ತೇವೆ

ರಸ್ತೆಯಲ್ಲಿ ಮಾತನಾಡಬೇಡಿ; ನಾವೂ ರಸ್ತೆಯಲ್ಲಿ ಹೇಳಬೇಕಾಗುತ್ತದೆ. ಅವರ ಭಾಷೆಯಲ್ಲೇ ಉತ್ತರ ನೀಡಬೇಕಾಗುತ್ತದೆ; ಹೈಕಮಾಂಡಿಗೆ ದೂರು ಕೊಡಬೇಕಾದೀತು ಎಂದು ಎಚ್ಚರಿಸಿದರು. ನಾವು ಒಟ್ಟಾಗಿ ಹೋಗಬೇಕು. ಯತ್ನಾಳ್ ಮತ್ತು ಅವರ ಜೊತೆಗಿನ 3-4 ಹಿರಿಯ ಸಂಗಡಿಗರು ಅವರ ಸಮಸ್ಯೆಗಳನ್ನು ಹಿರಿಯರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಲಿ. ಈ ಥರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *