ಮೇ 16 ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ’ ಅಭಿಯಾನ’.
ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. ‘ನಮ್ಮ ಇ ಖಾತಾ’ ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು” ಎಂದೂ ಅವರು ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.
“ಪಾಲಿಕೆ ಕಚೇರಿಗಳಲ್ಲಿ ಜನಸಂದಣಿ ಉಂಟಾಗಬಹುದು ಎಂದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರತಿ ವಾರ ಅಂದಾಜು 5 ಸಾವಿರ ಜನರ ದೂರುಗಳಿಗೆ ಪರಿಹಾರ ನೀಡಲಾಗುವುದು. ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು, ಕಡಿಮೆ ದಟ್ಟಣೆ ಇರುವ ಕಡೆ ಕಡಿಮೆ ಕೌಂಟರ್ ಗಳನ್ನು ತೆರೆಯಲಾಗುವುದು” ಎಂದು ಹೇಳಿದರು.
10 ತಿಂಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆ
“ಸ್ವಾಧೀನ ಪತ್ರ ಹೊಂದಿರುವ ಅಪಾರ್ಟ್ಮೆಂಟ್ ಗಳ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡಿಕೊಡಲಾಗುವುದು. 10 ತಿಂಗಳಲ್ಲಿ ಆನ್ ಲೈನ್ ಮೂಲಕ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮಾಡಿರುವುದು ಇಡೀ ದೇಶದಲ್ಲಿ ದಾಖಲೆ ಬರೆದಿದೆ. 37,480 ಫ್ಲಾಟ್ ಗಳಿಗೆ ಓಸಿ ನೀಡಲಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲಾ ಅಧಿಕಾರಿಗಳು, ಮನೀಶ್ ಮೌದ್ಗಿಲ್ ಅವರು, ಜಿಬಿಎ ಕಮಿಷನರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.
For More Updates Join our WhatsApp Group :




