ಆರೋಗ್ಯದ ಜೊತೆ ಚೆಲ್ಲಾಟ ಆರೋಪ: ರೈಲು ನಿಲ್ದಾಣದಲ್ಲಿ ಕೃತಕ ಬಣ್ಣ ಬಳಸಿ ಸೌತೆಕಾಯಿ ಮಾರಾಟ.!
ರೈಲು ಪ್ರಯಾಣದ ಸಮಯದಲ್ಲಿ ಹಸಿವಾದಾಗ ನಿಲ್ದಾಣಗಳಲ್ಲಿ ಸಿಗುವ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು ನಾವು ನಂಬಿ ಕೊಳ್ಳುತ್ತೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ರೈಲ್ವೆ ನಿಲ್ದಾಣಗಳಲ್ಲಿ ಸಿಗುವ ಆಹಾರದ ಶುದ್ಧತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.
ಸಾಮಾನ್ಯವಾಗಿ ಸೌತೆಕಾಯಿ ಅಂದಮೇಲೆ ಅದು ತಿಳಿ ಹಸಿರು ಅಥವಾ ಬಿಳಿ ಬಣ್ಣದಲ್ಲಿರುವುದು ಸಹಜ. ಆದರೆ ಈ ವಿಡಿಯೋದಲ್ಲಿ ಮಹಿಳೆ ಸೌತೆಕಾಯಿಯ ಸಿಪ್ಪೆ ಸುಲಿದ ನಂತರವೂ ಅದು ಗಾಢ ಹಸಿರು ಬಣ್ಣದಲ್ಲಿ ಕಾಣುವಂತೆ ಮಾಡಲು ಬಣ್ಣದ ನೀರನ್ನು ಬಳಸುತ್ತಿರುವುದು ಕಂಡುಬಂದಿದೆ. ನೋಡಲು ಆಕರ್ಷಕವಾಗಿ ಮತ್ತು ತಾಜಾವಾಗಿ ಕಾಣಲಿ ಎಂಬ ಕಾರಣಕ್ಕೆ ಜನರ ಆರೋಗ್ಯದ ಜೊತೆ ಹೀಗೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. “ನಾವು ಆರೋಗ್ಯಕ್ಕಾಗಿ ಹಣ್ಣು-ತರಕಾರಿಗಳನ್ನು ತಿಂದರೆ, ಇಲ್ಲಿ ವಿಷವನ್ನು ಉಣಬಡಿಸಲಾಗುತ್ತಿದೆ” ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆ (FSSAI) ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಲಕಾಲಕ್ಕೆ ತಪಾಸಣೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
For More Updates Join our WhatsApp Group :




