ಮೈಸೂರು: ಮುಂದಿನ ವರ್ಷದಿಂದ ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ತಿಂಗಳಿಗೆ 1,500 ರಿಂದ 2,000ಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಘೋಷಿಸಿದರು.
ಕನಕದಾಸರ ಜಯಂತೋತ್ಸವ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಜನರು ಪ್ರತಿ ವರ್ಷ ರೂ.50,000 ಉಳಿತಾಯ ಮಾಡುತ್ತಿದ್ದಾರೆ. ಮಹಿಳೆಯರ ಶಕ್ತಿ ಯೋಜನೆಗೆ ವಾರ್ಷಿಕ ಒಟ್ಟು 57 ಸಾವಿರ ಕೋಟಿ ಕೊಡಲಾಗುತ್ತಿದೆ. ಆದರೆ, ನಮ್ಮ ವಿರೋಧಿಗಳು ಬೇರೆ ಬೇರೆ ರೀತಿಯಲ್ಲಿ ವಿರೋಧಿಸುತ್ತಿದ್ದಾರೆ. ಅವರಿಗೆ ಬಡವರು ಮತ್ತು ಮಹಿಳೆಯರನ್ನು ವಿರೋಧ ಕಟ್ಟಿಕೊಳ್ಳಲು ಆಗದ ಹಿನ್ನೆಲೆಯಲ್ಲಿ ಶಕ್ತಿ ಯೋಜನೆಯನ್ನು ಕೈಬಿಡುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಕಿಡಿಕಾರಿದರು.
ನಾವು ಅವರ ಬಳಿ ದುಡ್ಡು ಕೇಳುವುದಕ್ಕೆ ಹೋಗಿದ್ದವಾ. ನಮ್ಮ ರಾಜ್ಯದ ಬಜೆಟ್ ಗಾತ್ರ 3 ಲಕ್ಷ ಕೋಟಿ ಮೀರಿದೆ. ಇದರಲ್ಲಿ 57 ಸಾವಿರ ಕೋಟಿಯನ್ನು ಮಹಿಳಾ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ಇನ್ನು ಯಾರು ತೆರಿಗೆ ಪಾವತಿಸುತ್ತಿದ್ದಾರೋ ಅವರ ಹೆಸರಿನ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಈ ಆಹಾರ ಸಂರಕ್ಷಣಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್. ಆದರೆ, ಅದನ್ನು ಅಂದಿನ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ ಅವರು ಓಟ್ ಸೆಕ್ಯುರಿಟಿ ಆಕ್ಟ್ ಎಂದು ವಿರೋಧಿಸಿದ್ದಾಗಿ ಹೇಳಿದರು. ಆದ್ದರಿಂದ ಪ್ರತಿಯೊಬ್ಬರು ಇತಿಹಾಸ ತಿಳಿಯಬೇಕು ಎಂದರು.
ಇದೇ ವೇಳೆ ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನ 1,500 ರೂ.ಗಳನ್ನು ಮುಂದಿನ ವರ್ಷದಿಂದ ರೂ.2 ಸಾವಿರಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.